ಟ್ಯೂಟನ್ನರು
ರೋಮನ್ ಚಕ್ರಾಧಿಪತ್ಯದ ಉತ್ತರದಲ್ಲಿ ರೈನ್ ಮತ್ತು ಡ್ಯಾನ್ಯೂಬ್ ನದಿಗಳ ಆಚೆಯ ಕಡೆ ನೆಲಸಿದ್ದವರು. ಇವರ ಬಗ್ಗೆ ಗ್ರೀಕ್ ನಾವಿಕ ಪಿತೀಯಸ್ ಮೊಟ್ಟಮೊದಲಿಗೆ ಉಲ್ಲೇಖಿಸಿದ್ದಾನೆ. ರೋಮನರು ಇವರನ್ನು ಅನಾಗರಿಕರೆಂದು ತಿಳಿದಿದ್ದರು. ಓದು, ಬರವಣಿಗೆ ಬರದೇ ಇದ್ದರೂ ಯೂರೋಪಿನ ಇತಿಹಾಸದಲ್ಲಿ ಇವರು ತಮ್ಮ ಸೈನ್ಯಶಕ್ತಿಯಿಂದ ಪ್ರಸಿದ್ಧಿ ಪಡೆದರು. ರೋಮನ್ ಸಾಮ್ರಾಜ್ಯದ ಮೇಲೆ ದಾಳಿಮಾಡಿ, ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಉತ್ತರ ಇಟಲಿಯಲ್ಲಿ ಇವರು ಸಿಂಬ್ರಿ ಬುಡಕಟ್ಟುಗಳೊಂದಿಗೆ ಸೇರಿ ದಾಳಿ ಮಾಡುತ್ತಿದ್ದಾಗ ಮೇರಿಯಸ್ ಎಂಬ ರೋಮನ್ ನಾಯಕ ಕ್ರಿ.ಶ. 102ರಲ್ಲಿ ಇವರನ್ನು ನಿರ್ನಾಮ ಮಾಡಿದ. ಉಳಿದ ಟ್ಯೂಟನ್ನರು ಕ್ರಿ.ಶ. 5ನೆಯ ಶತಮಾನದಲ್ಲಿ ಎಲ್ಲೆಲ್ಲಿಯೂ ಹರಡಿ, ತಮ್ಮ ಪ್ರಭಾವದಿಂದ ಅನೇಕ ರಾಜ್ಯಗಳನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಬ್ರಿಟನ್ನಿಗೆ ಹೋಗಲು ಯೋಚಿಸಿದರು. ಕ್ರಿ.ಶ. 407ರಿಂದ ಬ್ರಿಟನ್ನಿನಲ್ಲಿ ರೋಮನ್ನರ ಆಡಳಿತ ಕುಸಿದಿತಲ್ಲದೆ ಗಾಲ್‍ನಲ್ಲಿಯೂ ಅವರ ಪ್ರಾಬಲ್ಯ ಬಹುಬೇಗ ಕೊನೆಗೊಂಡಿತು. ಬ್ರಿಟನ್ನಿನಲ್ಲಿ ನೆಲಸಿದವರು ಟ್ಯೂಟನ್ ಕುಲದ ಸ್ಯಾಕ್ಸನ್ನರು, ಟ್ಯೂಟರು ಮತ್ತು ಆಂಗ್ಲರು. ಇವರು ಆಂಗ್ಲರೆಂದೂ ಆಂಗ್ಲೋ-ಸ್ಯಾಕ್ಸನ್ನರೆಂದೂ ಕರೆಯಲ್ಪಟ್ಟರು. ಟ್ಯೂಟನ್ನರನ್ನು ಸಾಮಾನ್ಯವಾಗಿ ಜರ್ಮನರೆಂದೇ ಕರೆಯುವುದು ಈಗ ರೂಢಿಯಲ್ಲಿದೆ.                                                       (ನೋಡಿ- ಜಮ್ರ್ಯಾನಿಕ್-ಜನಾಂಗ)								(ಬಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ